ಪೌನೀ ಮಹಾರಾಷ್ಟ್ರದ ಭಂಡಾರ ಜಿಲ್ಲೆಯಲ್ಲಿ ನಾಗಪುರ - ಭಂಡಾರ ದಾರಿಯಲ್ಲಿ, ನಾಗಪುರದಿಂದ ಆಗ್ನೇಯಕ್ಕೆ 82 ಕಿ.ಮೀ. ದೂರದಲ್ಲಿ, ವಿದರ್ಭದ ಪವಿತ್ರ ನದಿಗಳಲ್ಲೊಂದೆನಿಸಿದ ವೈನಗಂಗಾದ ನೈಋತ್ಯಕ್ಕೆ 3 ಕಿ.ಮೀ. ದೂರಕ್ಕೆ ಪೂ.ರೇ. 79039' ಮತ್ತು ಉ. ಅ. 20048'  ಮೇಲೆ ಇರುವ ಊರು ಪ್ರಾಕ್ತನ ನೆಲೆಯಾಗಿ ಪ್ರಸಿದ್ಧವಾಗಿದೆ.  

	ಪೌನಿ ಎಂಬ ಹೆಸರು ಪೌರಾಣಿಕ ಅರಸನಾದ  ಪವನನಿಂದ ಬಂದಿದೆಯೆಂಬುದು ಸ್ಥಳ ಪುರಾಣ.  ಇಲ್ಲಿ ಗೋಂಡ ಅರಸುಗಳು ಕಟ್ಟಿಸಿದ ಚೌಕಾಕಾರದ ಮಧ್ಯಯುಗೀನ ಕೋಟೆ ಇದೆ.  ಇದಕ್ಕಿಂತ ಮೊದಲು ಪೌನಿ ವಾಕಾಟಕರ ಆಡಳಿತಕ್ಕೊಳಪಟ್ಟಿತ್ತೆಂಬುದು ಇಲ್ಲಿ ದೊರೆತ ಆ ಮನೆತನದ 2 ನೆಯ ಪ್ರವರಸೇನನ ತಾಮ್ರ ಶಾಸನದಿಂದ ತಿಳಿಯುತ್ತದೆ.  ವಾಕಾಟಕರಿಗಿಂತ ಮೊದಲು ಕ್ಷತ್ರಪರು ಆಳುತ್ತಿದ್ದರೆಂಬುದು ಕ್ಷತ್ರಪರೂಪಿ ಅಮ್ಮನ ಛಾಯಾ ಸ್ತಂಭದಿಂದ ತಿಳಿಯುತ್ತದೆ.  ಭಾರ ವಂಶದ ಅರಸನಾದ ಭಗದತ್ತನ, ಕ್ರಿ.ಶ.ದ ಪ್ರಾರಂಭ ಕಾಲದ, ಬ್ರಾಹ್ಮೀ ಲಿಪಿಯ ಶಾಸನ 1935 ರಲ್ಲಿ ಸಿಕ್ಕಿದೆ.  ಹೆಜ್ಜೆ ಗುರುತುಗಳನ್ನು (ಪಜುಗಪತಿ) ಸಮರ್ಪಿಸಿದ ಸಂಗತಿಯನ್ನು ಈ ಶಾಸನ ತಿಳಿಸುತ್ತದೆ.  ಪೌನಿಯ ಹತ್ತಿರ ಇರುವ ಚಾಂಡಾ ಜಿಲ್ಲೆಯ ದೇವಟೀಕದಲ್ಲಿ ಅಶೋಕನ ಶಾಸನವಿದೆ.  

	ಕೋಟೆಯ ಹೊರಗೆ ಪ್ರಾಚೀನ ನೆಲೆಯ ದಿಬ್ಬಗಳಿವೆ.  1969-70 ರಲ್ಲಿ ಭಾರತದ ಪುರಾತತ್ತ್ವ ಇಲಾಖೆಯ ಉತ್ಖನನ ವಿಭಾಗದ ಶ್ರೀ ಜಗತ್ ಪತಿ ಜೋಶಿ ಮತ್ತು ನಾಗಪುರ ವಿಶ್ವವಿದ್ಯಾಲಯದ ಡಾ. ಶಾಂತಾರಾಮ ಭಾಲಚಂದ್ರದೇವರು ಈ ದಿಬ್ಬಗಳ ಉತ್ಖನನ ನಡೆಸಿದರು.  ಉತ್ಖನನದಲ್ಲಿ ಸಾಂಚಿ ಮತ್ತು ಭಾರತ್ ಸ್ತೂಪಗಳಂಥ ಬೃಹದಾಕಾರದ ಎರಡು ಸ್ತೂಪಗಳು ಬೆಳಕಿಗೆ ಬಂದುವು. ಅಭಿಯಂತರು ಹೊಸ ವಿಧಾನಗಳಿಂದ ಪೆಟ್ಟಿಗೆ ವಿಧಾನ ಮತ್ತು ಮೆಟ್ಟಲು ವಿಧಾನಗಳೆಂಬ ಎರಡು ಹೊಸ ವಿಧಾನಗಳನ್ನಾಗಿ ಇದನ್ನು ಕಟ್ಟಲಾಗಿತ್ತು.  ಜಗನ್ನಾಥ ಮಂದಿರ ಟೇಕ್ಡಿ ಕೋಟೆಯ ಸುತ್ತ ಇರುವ ಕಂದಕವನ್ನು ಬಾಲಸಮುದ್ರವೆಂದು ಕರೆಯುತ್ತಾರೆ.  ಬಾಲಸಮುದ್ರದ ದಕ್ಷಿಣ ತುದಿಯಲ್ಲಿರುವ ಜಗನ್ನಾಥ ಮಂದಿರದ ದಿಬ್ಬ 6 ಮೀ. ಎತ್ತರವಾಗಿದೆ.  ಮಧ್ಯಯುಗದ ಕೊನೆಯಲ್ಲಿ ದಿಬ್ಬದ ಮೇಲ್ಭಾಗವನ್ನು ಸಮತಳವಾಗಿ ಮಾಡಿ ಜಗನ್ನಾಥ ಮಂದಿರವನ್ನು ಕಟ್ಟಲಾಯಿತು.  ಉತ್ಖನನದಲ್ಲಿ ದೊರೆತ ಸ್ತೂಪವನ್ನು ಮೃಣ್ಪಾತ್ರೆ, ಶಾಸನ ಮತ್ತು ನಾಣ್ಯಗಳ ಆಧಾರದ ಮೇಲೆ ಕಾಲಕ್ಕೆ ಅನುಗುಣವಾಗಿ ಮೂರು ಹಂತಗಳಾಗಿ ವಿಂಗಡಿಸಲಾಗಿದೆ.

	ಮೌರ್ಯ ಕಾಲ (ಕ್ರಿ.ಪೂ. 3 ನೆಯ ಶತಮಾನ) : ಮೂಲ ಸ್ತೂಪವನ್ನು ಸುಟ್ಟ ಇಟ್ಟಿಗೆಗಳಿಂದ (40 ಘಿ 37 ಘಿ 10 sಸೆಂ. ಮೀ.) ಮುರಗಲ್ಲಿನ ಮೇಲೆ ಕಟ್ಟಲಾಗಿತ್ತು.  ಸ್ತೂಪದ ವ್ಯಾಸ 38.20 ಮೀ. ಮೇಲಿನ ಭಾಗ ನಾಶವಾಗಿರುವುದರಿಂದ ಎತ್ತರವನ್ನು ನಿರ್ಧರಿಸಲಾಗುವುದಿಲ್ಲ.  ಸ್ತೂಪದ ಅಡಿಪಾಯದ ಮೇಲೆ ಬೀಳುವ ಭಾರವನ್ನು ಕಡಿಮೆ ಮಾಡಲು ಅಂಡವನ್ನು ಪೆಟ್ಟಿಗೆಗಳ ಆಕಾರದಲ್ಲಿ ಕಟ್ಟಿ, ಇಟ್ಟಿಗೆ ಚೂರು ಮತ್ತು ಮಣ್ಣಿನಿಂದ ತುಂಬಿದ್ದಾರೆ.

	ಶುಂಗಕಾಲ (ಕ್ರಿ. ಪೂ. 2-1 ನೆಯ ಶತಮಾನ) : ಮೂಲ ಸ್ತೂಪ ಕಟ್ಟಿದ ಅನಂತರ ಅಂಡವನ್ನು 1.48 ಮೀ ದಪ್ಪವಾದ ಹೊದಿಕೆಯಿಂದ ಮುಚ್ಚಲಾಗಿತ್ತು.  ಸ್ತೂಪದ ಸುತ್ತಲೂ ಮರದ ಕಟಕಟೆಯುಳ್ಳ ಸುಣ್ಣ ಗಾರೆಯ ಪ್ರದಕ್ಷಿಣ ಪಥ ಮಾಡಲಾಯಿತು.  ಕೆಲಕಾಲದ ಅನಂತರ ಮರದ ಕಟಕಟೆ ಮತ್ತು ಪ್ರದಕ್ಷಿಣ ಪಥ ಜೀರ್ಣವಾದಾಗ ಎರಡನೆಯ ಹೊದಿಕೆಯನ್ನು ಮೊದಲಿನಂತೆ ಪೆಟ್ಟಿಗೆ ವಿಧಾನದಲ್ಲಿ ಕಟ್ಟಲಾಯಿತು.  ಆಗ ಸ್ತೂಪದ ವ್ಯಾಸ 41.2 ಮೀ ಆಯಿತು.  ಸ್ತೂಪದ ಸುತ್ತಲೂ 5 ವರಸೆಗಳ ಇಟ್ಟಿಗೆ ವರ್ತುಲವನ್ನು ಕಟ್ಟಲಾಯಿತು.  ಮೇಲಿನ ವರಸೆಯಲ್ಲಿ ಮರದ ಕಂಬಗಳನ್ನು ನೆಡಲಾಗಿತ್ತು.  ಸುಣ್ಣ ಮತ್ತು ಅಭ್ರಕವನ್ನು ಹರಡಿ ಪ್ರದಕ್ಷಿಣ ಪಥವನ್ನು ಮಾಡಲಾಗಿತ್ತು.  

	ಕಾಲಕ್ರಮದಲ್ಲಿ ಮರದ ಕಂಬಗಳು ನಶಿಸಿ ಹೋದಾಗ ಅವುಗಳ ಸ್ಥಳದಲ್ಲಿ ಶಿಲಾ ಫಲಕಗಳ ಮೇಲೆ ಶಿಲಾಸ್ತಂಭಗಳನ್ನು ನಿಲ್ಲಿಸಲಾಯಿತು.  ಈ ಕಂಬಗಳು ಸ್ತೂಪಕ್ಕೆ ಒಳ ವೇದಿಕೆಯನ್ನು ಒದಗಿಸಿದವು.  ಕಂಬಗಳು ನೆಲದಡಿಯಲ್ಲಿ ಚೌಕವಾಗಿದ್ದು, ಮೇಲೆ ಷಟ್ಕೋನವಾಗಿದ್ದು ಹಿಂದಿನ ಭಾಗ ಚಪ್ಪಟೆಯಾಗಿವೆ.  ಕೆಲವು ಕಂಬಗಳ ಹೊರಮುಖದ ಮೇಲೆ ಯಕ್ಷರ ಶಿಲ್ಪಗಳನ್ನು ಕೆತ್ತಲಾಗಿದೆ.  ಖರಮುಖ ಯಕ್ಷನದು ಇವುಗಳಲ್ಲೊಂದು.  ಮೇಲಿನ ಉಷ್ಣೀಶ ಎಲ್ಲ ಕಂಬಗಳನ್ನು ಜೋಡಿಸುವಂತಿತ್ತು.

ಒಳ ವೇದಿಕೆಯ ಹೊರಗೆ ಗಚ್ಚಿನಿಂದ ಮಾಡಿದ ವಿಶಾಲವಾದ ಪ್ರದಕ್ಷಿಣ ಪಥವಿದೆ.  ಪ್ರದಕ್ಷಿಣ ಪಥದ ಕೊನೆಯಲ್ಲಿ ದಪ್ಪವಾದ ಹೊರವೇದಿಕೆ ಇದೆ.  ವೇದಿಕೆಯ ಕಂಬಗಳು ಅಷ್ಟಕೋನಗಳುಳ್ಳವಾಗಿದ್ದು ಒಳಮುಖಗಳ ಮೇಲೆ ಬೌದ್ಧೀ ಚಿಹ್ನೆಗಳಾದ ಸ್ತೂಪ, ಚೈತ್ಯ, ಬೋಧಿವೃಕ್ಷ, ಭದ್ರಾಸನ ಮುಂತಾದವುಗಳ ಹೆಣ್ಣು ಮತ್ತು ಗಂಡು ಭಕ್ತಾದಿಗಳ ಮುಚಳಿಂದ ನಾಗ ಮೊದಲಾದ ಬೌದ್ಧ ಕಥೆಗಳ ಶಿಲ್ಪಗಳನ್ನು ಕೆತ್ತಲಾಗಿದೆ.  ಪ್ರತಿಯೊಂದು ಕಂಬಕ್ಕೆ ನಾಲ್ಕು ಸೂಚಿಗಳಿವೆ.  ಕೆಳಗಿನವು ಆಯತಾಕಾರವಾಗಿವೆ.  ಉಳಿದ ಮೂರು ದರ್ಪಣಾಕಾರವಾಗಿದ್ದು, ಮೇಲೆ ಹೋದಂತೆ ಚಿಕ್ಕವಾಗುತ್ತವೆ.  ಸೂಚಿಗಳ ಮೇಲೆ ಶಿಲ್ಪಗಳಿಲ್ಲ.  ಆದರೆ, ಬ್ರಾಹ್ಮೀ ಲಿಪಿಯ  ಶಾಸನಗಳಿವೆ.  ಉಷ್ಣೀಶದ ಕೆಳಭಾಗ ಚಪ್ಪಟೆಯಾಗಿದ್ದು ಮೇಲ್ಭಾಗ ವೃತ್ತಾಕಾರವಾಗಿದೆ.  ಕೆಲವು ಕಂಬಗಳ ಮತ್ತು ಉಷ್ಣೀಶದ ಮೇಲೂ ಶಾಸನಗಳಿವೆ.  ಶಾಸನಗಳು ದಾನಿಗಳ ಹೆಸರುಗಳನ್ನು ಮತ್ತು ದಾನದ ವಿವರಣೆಯನ್ನು ಕೊಡುತ್ತವೆ.  
ವೇದಿಕೆಗೆ ಹೊಂದಿಕೊಂಡಂತೆ ನಾಲ್ಕು ದಿಕ್ಕುಗಳಲ್ಲಿ ದೊಡ್ಡ ತೋರಣಗಳನ್ನು ನಿಲ್ಲಿಸಲಾಗಿದೆ.  ಪ್ರತಿ ತೋರಣ ಮೂರು ಕಂಬಗಳಿಂದ ರಚಿತವಾಗಿದೆ.

ಸ್ತೂಪದ ಆವರಣದಲ್ಲಿ ಶಿಲಾಸ್ತಂಭವನ್ನು ನಿಲ್ಲಿಸಿದ್ದುದು ಉತ್ಖನನದಲ್ಲಿ ದೊರೆತ ಅದರ ಉದ್ದ ಪಟ್ಟಿಯುಳ್ಳ ಬೋಧಿಗೆಯಿಂದ ತಿಳಿಯುತ್ತದೆ.  ಹರ್ಮಿಕಾದಲ್ಲಿ ಯಷ್ಟಿಯ ಮೇಲೆ ಮುಕ್ಕೊಡೆಯ ಛತ್ರಾವಳಿಯಿತ್ತೆಂಬುದು ಸ್ತೂಪದ ಸುತ್ತಮುತ್ತ ದೊರೆತ ವೃತ್ತಾಕಾರದ ಶಿಲಾ ಫಲಕಗಳ ತುಂಡುಗಳಿಂದ ಗೊತ್ತಾಗುತ್ತದೆ.  

ಶಾತವಾಹನ - ಕ್ಷತ್ರಪಕಾಲ (ಕ್ರಿ.ಪೂ. 1 - ಕ್ರಿ. ಶ. 2 ನೆಯ ಶತಮಾನ) : ಈ ಕಾಲದ ಶಾತವಾಹನ ಮತ್ತು ಕ್ಷತ್ರಪರ ನಾಣ್ಯಗಳು ಸಿಕ್ಕಿವೆ.  ವೇದಿಕೆಯ ಕಂಬ ಮತ್ತು ಸೂಚಿಗಳನ್ನು ದುರಸ್ತಿ ಮಾಡಿದ್ದುದು ಅವುಗಳ ಮೇಲೆ ಶಾಸನ ಮತ್ತು ಶಿಲ್ಪಗಳಿಂದ ತಿಳಿಯುತ್ತದೆ.  ಕ್ರಿ. ಶ. 3 ನೆಯ ಶತಮಾನದ ಅನಂತರ ಸ್ತೂಪವು ಜನ ಆಶ್ರಯ ಕಳೆದುಕೊಂಡಿತು.  

ಚಾಂಡಕಾಪುರ ಟೇಕ್ಡಿ : ವೃತ್ತಾಕಾರವಾಗಿ ಸುಮಾರು 8 ಮೀ ಎತ್ತರವಿರುವ ಈ ದಿಬ್ಬ ಜಗನ್ನಾಥ ಟೇಕ್ಡಿಯ ದಕ್ಷಿಣಕ್ಕೆ 2 ಕಿ.ಮೀ. ದೂರದಲ್ಲಿದೆ.  ಇದು ಚಾಂಡಕಾಪುರಕ್ಕೆ ಸೇರಿದೆ.

ಇಲ್ಲಿಯ ಸ್ತೂಪದ ಅಡಿಪಾಯ ಗಟ್ಟಿಮಣ್ಣಿನ ಒಂದು ಮೀಟರ್ ದಪ್ಪವಾದ ಸ್ತರದಿಂದ ಮಾಡಿದ್ದು.  ಈ ಸ್ತೂಪದ ವಾಸ್ತು ಜಗನ್ನಾಥ ಟೇಕ್ಡಿಯ ಸ್ತೂಪದ ವಾಸ್ತುಗಿಂತ ಭಿನ್ನವಾದ್ದು.  ಸುಟ್ಟ ಇಟ್ಟಿಗೆ ಮತ್ತು ಮಣ್ಣಿನ ಇಟ್ಟಿಗೆಗಳ ಜಗತಿಗಳನ್ನು ಪರ್ಯಾಯವಾಗಿ ಒಂದರ ಮೇಲೆ ಒಂದರಂತೆ ಮೆಟ್ಟಿಲಿನ ಆಕಾರದಲ್ಲಿ ಕಟ್ಟಲಾಗಿದೆ.  ಸುಟ್ಟ ಇಟ್ಟಿಗೆಯ ನಾಲ್ಕು ಮತ್ತು ಮಣ್ಣಿನ ಇಟ್ಟಿಗೆ ನಾಲ್ಕು ಜಗತಿಗಳು ಉಳಿದಿವೆ.  ಮೇಲಿನ ಭಾಗ ಹಾಳಾಗಿದೆ.  ಜಗತಿಯ ತುದಿಯಲ್ಲಿರುವ ಇಟ್ಟಿಗೆಗಳು ಮೇಲೆ ಹೋದಂತೆ ಹಿಂದಕ್ಕೆ ಸರಿಯುತ್ತ ಹೋಗುತ್ತವೆ.  ಸುಟ್ಟ ಇಟ್ಟಿಗೆ ಗಾತ್ರ 54 ಘಿ 34 ಘಿ 7 ಸೆಂ.ಮೀ.  ಜಗತಿಗಳ ಮಧ್ಯದ ಭಾಗವನ್ನು ಇಟ್ಟಿಗೆಯ ತುಂಡು ಮತ್ತು ಮಣ್ಣಿನಿಂದ ತುಂಬಿ ಗೋಲಾಕಾರವಾಗಿ ಮಾಡಿ ಹೊರಮೈಮೇಲೆ ಸುಟ್ಟ ಇಟ್ಟಿಗೆಗಳನ್ನು ಜೋಡಿಸಿದ್ದಾರೆ.  ಇದರಿಂದ ಇಡೀ ಸ್ತೂಪ ಸುಟ್ಟ ಇಟ್ಟಿಗೆಗಳಿಂದ ಮಾಡಿದಂತೆ ಕಾಣುತ್ತದೆ.  

ಸ್ತೂಪದ ಮೇಲ್ಭಾಗ ಹಾಳಾಗಿರುವುದರಿಂದ ಹರ್ಮಿಕಾ ಮತ್ತು ಛತ್ರಾವಳಿಗಳ ಬಗ್ಗೆ ಏನೂ ಗೊತ್ತಾಗಿಲ್ಲ.  ಈಗ ಉಳಿದಿರುವ ಸ್ತೂಪದ ವ್ಯಾಸ 41.60 ಮೀ., ಎತ್ತರ 7.50 ಮೀ. ಪ್ರದಕ್ಷಿಣ ಪಥ, ವೇದಿಕೆ ಮತ್ತು ತೋರಣಗಳಿಲ್ಲ.  ಚಾಂಡಕಾಪುರ ಸ್ತೂಪ ಜಗನ್ನಾಥ ಸ್ತೂಪಕ್ಕಿಂತ ದೊಡ್ಡದಾಗಿದ್ದರೂ ಹೆಚ್ಚಿನ ಅಲಂಕಾರವಿಲ್ಲದೆ ಸರಳವಾಗಿದೆ.

ಸ್ವಲ್ಪ ಕಾಲದ ನಂತರ ಸ್ತೂಪದ ಕೆಳಭಾಗ ಹಳ್ಳದ ತೆರೆಗಳಿಂದ ಹಾಳಾಗತೊಡಗಿದಾಗ ಸ್ತೂಪದ ಸುತ್ತಲೂ ಇಟ್ಟಿಗೆಯ ಬೀಸಣಿಕೆಯಾಕಾರದ ವರ್ತುಲವನ್ನು ನೆಲಕ್ಕೆ 390 ಕೋನದಲ್ಲಿ ಕಟ್ಟಲಾಗಿದೆ.  
ಅತಿ ಕೆಳಗಿನ ಜಗತಿಗಿಂತ 6.86 ಕಿ.ಮೀ. ಕೆಳಗೆ ಸುಟ್ಟ ಇಟ್ಟಿಗೆಯ, ಕುಂಡದ ಆಕಾರದ ಕಟ್ಟಡವಿದೆ.  ಇದರಲ್ಲಿ ಜಜ್ಜಿ ಹೋದ ಒಂದು ಮಡಕೆ ಮತ್ತು ಮಾನವನ ಅಸ್ಥಿಗಳು ದೊರೆತುವು.  ಈ ಸ್ತೂಪದ ಕಾಲ ಕ್ರಿ. ಪೂ. ಒಂದನೆಯ ಶತಮಾನದಿಂದ ಕ್ರಿ. ಶ. ಎರಡನೆಯ ಶತಮಾನ.
(ಸಿ.ಎಸ್.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ